Monday, April 13, 2015

ಲಾವಾದಿಂದ ಹುಟ್ಟಿದ ನಡುಗಡ್ಡೆಗಳು - ಕೆನರಿ ಐಲಾಂಡ್ಸ್

ಹೀಗೊಂದು ಪ್ರವಾಸ. ವಾಯು ಮಾರ್ಗವಾಗಿಯೇ ಆ ಊರು ತಲುಪಲು ಸಾಧ್ಯ. ವಿಮಾನದಲ್ಲಿ ಪೈಲಟ್ ನಾವು ಗಮ್ಯ ಸ್ಥಳಕ್ಕೆ ತಲುಪಲಿದ್ದೇವೆ ಸೀಟ್ ಬೆಲ್ಟ್ ಹಾಕಿಕೊಳ್ಳಿ ಎಂದು ಹೇಳುತ್ತಿದ್ದಂತೆ ವಿಮಾನ ಕೆಳಗಿಳಿಯುವುದನ್ನೇ ನೋಡುತ್ತಿದ್ದರೆ ಸುತ್ತಲೂ ಸಮುದ್ರ. ಅಯ್ಯೋ ರಾಮ! ಇದೆಲ್ಲಿ ಇಳಿಸುತ್ತಿದ್ದಾರೆ ನಮ್ಮನ್ನ ಎಂದುಕೊಳ್ತಾ ಕೆಳಗೆ ನೋಡಿದಷ್ಟೂ ಸಮುದ್ರವೇ..."ಇಲ್ಲೇ ಎಲ್ಲೋ ಭೂಮಿಯೂ ಇರುತ್ತೆ ಸುಮ್ನೆ ಸಮುದ್ರದಲ್ಲಿ ವಿಮಾನವನ್ನು ಯಾಕ್ ಇಳ್ಸ್ತಾರೆ" ಅಂತ ಯೋಚಿಸ್ತಾ ಆದ್ರೂ ಮನಸಲ್ಲೆ ಇಷ್ಟ ದೇವರನ್ನು ಪ್ರಾರ್ಥಿಸುತ್ತಾ ನೋಡುತ್ತಿದ್ದಂತೆ ಸಮುದ್ರದ ಅಂಚಿನಲ್ಲಿಯೇ ಸಮುದ್ರಕ್ಕೇ ಕಟ್ಟೆ ಕಟ್ಟಿ ನಿರ್ಮಿಸಿರುವ ಸುಂದರ ರೋಡ್ ನಲ್ಲಿ ಅಂದರೆ ರನ್ ವೇ ನಲ್ಲಿ ವಿಮಾನ ಇಳಿದು ಸಾಗುತ್ತಿದ್ದರೆ ಸುತ್ತಲೂ ನೀಲ ಜಲರಾಶಿ. ಸಮುದ್ರಕ್ಕೆ ಒರಗಿಕೊಂಡೇ ನಿರ್ಮಿಸಲ್ಪಟ್ಟಿರುವ ಈ ಪುಟ್ಟ ವಿಮಾನ ನಿಲ್ದಾಣಗಳು ಜಗತ್ತಿನ ವಿವಿಧ ಭಾಗಗಳನ್ನು ಈ ಪುಟ್ಟ ನಡುಗಡ್ಡೆಗೆ ಜೋಡಿಸುವ ಪ್ರಮುಖ ಸಂಚಾರಿ ಸೇತುವೆ. ಈ ಪುಟ್ಟ ವಿಮಾನ ನಿಲ್ದಾಣದಿಂದ ಹೊರ ಬಂದು ಸುತ್ತಲೂ ಒಮ್ಮೆ ಕಣ್ಣಾಡಿಸಿದರೆ ಉದ್ದಕ್ಕೂ ಹರಡಿ ನಿಂತ ಕಡಲು. ಕಡಲಿಗೆ ಜೊತೆ ನೀಡುವ ಆಕಾಶ. ನೀಲಿ ಶರಧಿ ತನ್ನ ನೀಲಿಯನ್ನು ಮುಗಿಲಿಗೆ ಎರವಲು ಕೊಟ್ಟಿರುವಳೋ ಅಥವಾ ಆಗಸವೇ ಸಾಗರಿಗೆ ನೀಲಿ ಬಣ್ಣ ಬಳಿದಿಹನೋ ಎನಿಸುವಂತ ನೋಟ.
ಹೀಗೆ ವಿಮಾನದಿಂದ ಬಂದಿಳಿಯುತ್ತಿದ್ದಂತೆ ಹೊಸತೊಂದು ಲೋಕಕ್ಕೆ ಬಂದ ಅನುಭವ ನೀಡುವ ಈ ಸ್ಥಳ ಕೆನರಿ ಐಲಾಂಡ್ಸ್. ಇಂದೊಂದು ಅಟ್ಲಾಂಟಿಕ್ ಸಮುದ್ರದಲ್ಲಿನ ದ್ವೀಪ ಸಮೂಹ. ಸ್ಪೈನ್ ದೇಶದ ಆಡಳಿತವ್ಯಾಪ್ತಿಗೆ ಸೇರುವ ಈ ದ್ವೀಪಗಳನ್ನು ಕೆನರೀಸ್, ಗ್ರ್ಯಾನ್ ಕೆನರಿಯ ಎಂದೂ ಕರೆಯುತ್ತಾರೆ. ಕೆನರಿ ಐಲಾಂಡ್ಸ್ ನಲ್ಲಿರುವುದು ಪ್ರಮುಖವಾಗಿ ಏಳು ದ್ವೀಪಗಳು. ಸುತ್ತ ಮುತ್ತಲೂ ಇನ್ನೂ ಹಲವಾರು ಚಿಕ್ಕ ಚಿಕ್ಕ ನಡುಗಡ್ಡೆಗಳು ಇದ್ದರೂ ಅಲ್ಲಿ ಜನ ವಸತಿ ಇಲ್ಲದ ಕಾರಣ ಈ ಏಳು ನಡುಗಡ್ಡೆಗಳು ಮಾತ್ರ ಕೆನರಿ ಐಲ್ಯಾಂಡ್ಸ್ ಎಂದು ಗುರುತಿಸಲ್ಪಡುತ್ತದೆ. ಈ ನಡುಗಡ್ಡೆಗಳು ಸ್ಪೈನ್ ದೇಶದ ಆಡಳಿತ ವ್ಯಾಪ್ತಿಗೆ ಸೇರಿದ್ದರೂ ಇಲ್ಲಿನ ಜನ ಜೀವನ, ಸಂಸ್ಕೃತಿ, ಭೂಪರಿಸರ, ವಾತಾವರಣ ಹೀಗೆ ಎಲ್ಲಾ ವಿಷಯಗಳಲ್ಲಿಯೂ ತನ್ನದೇ ಆದ ಸ್ವಂತಿಕೆಯನ್ನು ಹೊಂದಿದೆ. ಆದರೆ ಎದುರಾಗುತ್ತಿದ್ದಂತೆ "ಹೊಲಾ, ಕೊಮೊ ಎಸ್ಟಾ" (ಹಲೋ, ಹೌ ಆರ್ ಯು) ಎಂದು ಕೇಳುವ ಇವರ ಭಾಷೆ ಮಾತ್ರಾ ಶುದ್ಧ ಸ್ಪ್ಯಾನಿಷ್. ಆದರೆ ಈ ನಡುಗಡ್ಡೆಗಳು ಸ್ಪೈನ್ ಗಿಂತಲೂ ಆಫ್ರಿಕಾಕ್ಕೆ ಹತ್ತಿರದಲ್ಲಿದ್ದು ಆಫ್ರಿಕಾದ ವಾಯವ್ಯಕ್ಕೆ ಸುಮಾರು 100 ಕಿಲೋಮೀಟರ್ ದೂರದಲ್ಲಿವೆ. ಯುರೋಪ್ ನ ಹಲವು ದೇಶಗಳಿಂದ ಈ ನಡುಗಡ್ಡೆಗಳಿಗೆ ವಿಮಾನ ಸಂಪರ್ಕವಿದೆ. ವಿಮಾನವಲ್ಲದೇ ಸ್ಪೈನ್ ನಿಂದ ಹಡಗು(Ferry)ಸಂಚಾರದ ವ್ಯವಸ್ತೆಯೂ ಇದೆ. ವಾರದಲ್ಲಿ ಎರಡು ದಿನ ಸ್ಪೈನ್ ನಿಂದ ಹೊರಡುವ ಹಡಗು ಸಂಚಾರಿಗಳನ್ನು, ವ್ಯಾಪಾರಸ್ಥರನ್ನು, ಸಾಮಾನು ಸರಕುಗಳನ್ನು, ಆಹಾರ ಪದಾರ್ಥಗಳನ್ನು ಈ ನಡುಗಡ್ಡೆಗಳಿಗೆ ತಲುಪಿಸುತ್ತದೆ.
ಪ್ರವಾಸಿಗರ ಸ್ವರ್ಗ ಕೆನರಿ ಐಲಾಂಡ್ಸ್ ನ ಬದುಕು ಟೂರಿಜಂ ಮೇಲೆಯೇ ಅವಲಂಬಿತವಾಗಿದೆ. ಸಮುದ್ರ ಹಾಗೂ ಸುಂದರ ಬೀಚ್ ಗಳಿಂದಲೇ ಹೆಸರುವಾಸಿಯಾದ ಈ ನಡುಗಡ್ಡೆಗಳ ವಾತಾವರಣವೂ ಅಷ್ಟೇ ಹಿತ. ಅತೀ ಎನಿಸುವಷ್ಟು ಚಳಿ ಮಳೆ ಬಿಸಿಲು ಯಾವುದೂ ಇಲ್ಲ. ಬೇಸಿಗೆಯಲ್ಲಿ ಸ್ವಲ್ಪ ಸುಡುವ ಬಿಸಿಲಿದ್ದರೂ ಸೆಕೆ ಇರುವುದಿಲ್ಲ. ಸುಂದರ ಬೀಚ್ ಗಳು ಹಾಗೂ ಸುಂದರ ಪಾರ್ಕ್ ಗಳನ್ನು ಹೊಂದಿರುವ ಈ ದ್ವೀಪಗಳು ಯುರೋಪಿನ ಪ್ರವಾಸ ಪ್ರಿಯರಿಗಂತೂ ಅಚ್ಚುಮೆಚ್ಚಿನ ತಾಣ. ಈ ದ್ವೀಪಗಳು ಭೂಮಿಯ ವಿಧವಿಧ ವೇಷಗಳನ್ನೂ, ಅವತಾರಗಳನ್ನೂ ಒಳಗೊಂಡ ಮಿನಿಯೆಚರ್ ನಂತೆ ಅಂದರೂ ಅತಿಶಯೋಕ್ತಿಯಾಗಲಾರದೇನೋ! ಎಲ್ಲೆಂದರಲ್ಲಿ ಕಾಣಸಿಗುವ ಮೈಲುದ್ದದ ಸುಂದರ ಬೀಚ್ ಗಳು, ಮರಳುಗಾಡಿನಲ್ಲಿ ಕಾಣಸಿಗುವ ಮರಳ ದಿಬ್ಬಗಳು, ವೈವಿಧ್ಯಮಯ ದಟ್ಟ ಹಸಿರು ಕಾಡು ಇವೆಲ್ಲವೂ ಈ ಚಿಕ್ಕ ದ್ವೀಪಗಳಲ್ಲೇ ಕಾಣಸಿಗುವುದೇ ಈ ದ್ವೀಪಗಳ ವಿಶೇಷ. ಅಷ್ಟೇ ಅಲ್ಲದೇ, ಐತಿಹಾಸಿಕ ಸ್ಥಳಗಳೂ, ವೋಲ್ಕಾನೋ ಗುಡ್ಡಗಳೂ ಈ ದ್ವೀಪಗಳ ಇತಿಹಾಸ ತೆರೆದಿಡುತ್ತವೆ. ಕೆನರಿ ಐಲಾಂಡ್ಸ್ ನ ಇನ್ನೊಂದು ವಿಶೇಷವೆಂದರೆ ಇದರ ರಾಜಧಾನಿ ಪಟ್ಟವನ್ನು 2 ನಗರಗಳು ಹಂಚಿಕೊಂಡಿವೆ. ಬೇರೆಲ್ಲವುಗಳಿಗಿಂತ ದೊಡ್ಡದಾದ ಎರಡು ನಡುಗಡ್ಡೆಗಳು ಸಾಂಟಾ ಕ್ರೂಜ್ ಡೇ ಟೆನರೀಫ್ ಮತ್ತು ಲಾಸ್ ಪಲ್ಮಾಸ್. ಈ ಎರಡೂ ಕೂಡ ಕೆನರಿ ಐಲಾಂಡ್ಸ್ ನ ರಾಜಧಾನಿ ನಗರಗಳು. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಡಳಿತ ಕೇಂದ್ರ ಒಂದು ಪಟ್ಟಣದಿಂದ ಇನ್ನೊಂದಕ್ಕೆ ವರ್ಗಾಯಿಸಲ್ಪಡುತ್ತದೆ. ಕೆನರಿ ಐಲಾಂಡ್ಸ್ ನ ಇನ್ನುಳಿದ ನಡುಗಡ್ಡೆಗಳು ಲಂಜಾರೋಟ್, ಫ್ಯೂರ್ಟೋವೆಂಚೂರಾ, ಗ್ರಾನ್ ಕೆನರಿಯ, ಗೋಮೇರೋ ಮತ್ತು ಹಿಯರೋ. ಆಶ್ಚರ್ಯದ ಸಂಗತಿಯೆಂದರೆ ಈ ಎಲ್ಲಾ ನಡುಗಡ್ಡೆಗಳು ಒಂದರ ಪಕ್ಕವೇ ಇನ್ನೊಂದಿದ್ದರೂ ಪ್ರತಿ ನಡುಗಡ್ಡೆಯ ಭೂಚರ್ಯೆ ಒಂದರಿಂದ ಇನ್ನೊಂದು ತುಂಬಾ ವಿಭಿನ್ನವಾಗಿದೆ. ಇಲ್ಲಿ ಒಂದು ನಡುಗಡ್ಡೆಯಿಂದ ಇನ್ನೊಂದಕ್ಕೆ ಕರೆದುಕೊಂಡು ಹೋಗಲು ಪ್ರತಿದಿನ ಹಲವಾರು ಬೋಟ್ ಗಳು ಹಾಗೂ ಹಡಗುಗಳ ವ್ಯವಸ್ಥೆಯಿದೆ. ಕೆನರಿ ಐಲ್ಯಾಂಡ್ಸ್ ನ ಪ್ರಮುಖ ವಾಣಿಜ್ಯ ಕೇಂದ್ರ ಸಾಂಟಾ ಕ್ರೂಜ್ ಡೇ ಟೆನರೀಫ್. ಹೆಚ್ಚಿನ ಪಶ್ಚಿಮಾತ್ಯ ಪ್ರವಾಸಿಗರು ಈ ನಡುಗಡ್ಡೆಯಲ್ಲಿಯೇ ಹೋಲಿಡೇ ಹೋಮ್ ಅಥವಾ ಹೊಟೇಲ್ ಬುಕ್ ಮಾಡಲು ಇಷ್ಟ ಪಡುವುದರ ಉದ್ದೇಶ ನಿದ್ದೆಯೆನೆಂದೇ ತಿಳಿಯದ ಇಲ್ಲಿಯ ನೈಟ್ ಲೈಫ್. ಈ ನಡುಗಡ್ಡೆಯಲ್ಲಿ ವರ್ಷ ಪೂರ್ತಿ ರಾತ್ರಿ ಪೂರ್ತಿ ಪಾರ್ಟಿ ಗಳು ನಡೆಯುತ್ತಲೇ ಇರುವುದಷ್ಟೇ ಅಲ್ಲ ಎಲ್ಲಾ ಕ್ಲಬ್ ಗಳೂ ತುಂಬಿ ತುಳುಕುತ್ತಿರುತ್ತವೆ.

 ಲಾವಾದಿಂದ ಹುಟ್ಟಿದ ನಡುಗಡ್ಡೆಗಳು

 ಸಮುದ್ರ ಮಧ್ಯದಲ್ಲಿ ಈ ಸುಂದರ ಭೂ ತುಣುಕುಗಳು ಒಡಮೂಡಿದ್ದು ಕಡಲೊಳಗಿನ ಬೆಂಕಿಯಿಂದ! ಹೌದು, ಸುಮಾರು 23 ಮಿಲಿಯನ್ ವರ್ಷಗಳ ಹಿಂದೆಯೇ ಸಮುದ್ರದೊಳಗಿನ ಲಾವಾ ಪ್ರಕ್ರಿಯೆಯಿಂದಾಗಿ ಈ ನಡುಗಡ್ಡೆಗಳು ಸೃಷ್ಟಿಯಾಗತೊಡಗಿದವು. ಒಂದಾದ ಮೇಲೊಂದರಂತೆ ಹುಟ್ಟಿಕೊಂಡ ಈ ನಡುಗಡ್ಡೆಗಳ ಪಟ್ಟಿ ಇನ್ನೂ ಬೆಳೆಯುತ್ತಲೇ ಇದೆ. 2011 ರಲ್ಲಿ ಎಲ್ ಹಿಯರೋ ನಡುಗಡ್ಡೆಯ ಸಮೀಪದ ಸಮುದ್ರದಲ್ಲಿ ಲಾವಾ ಸ್ಪೋಟಗೊಂದು ಅದರಿಂದ ಆಚೆ ಎಸೆಯಲ್ಪಟ್ಟ ಕಲ್ಲುಬಂಡೆಗಳು, ಬೂದಿ, ಮರಳುಗಳು ಎಲ್ಲವೂ ಸೇರಿ ಸಮುದ್ರದೊಳಗೊಂದು ಬೆಟ್ಟ ನಿರ್ಮಿಸಿವೆ. ಅಲ್ಲಿಯ ವೋಲ್ಕಾನೋ ಚಟುವಟಿಕೆಗಳನ್ನು ಗಮನಿಸುತ್ತಿರುವ ವಿಜ್ನಾನಿಗಳು ಇನ್ನೊಂದು ನಡುಗಡ್ಡೆ ಹುಟ್ಟಿಕೊಳ್ಳುವ ಪ್ರಕ್ರಿಯೆ ಆಗಲೇ ನಡೆಯುತ್ತಿದೆ ಎನ್ನುತ್ತಿದ್ದಾರೆ. ಇಲ್ಲಿನ ಮೌಂಟ್ ಟೀಡ್ ಎಂಬ ವೋಲ್ಕಾನೋ ಪರ್ವತ ಜಗತ್ತಿನ ಮೂರನೇ ದೊಡ್ಡ ಲಾವಾ ಪರ್ವತವಾಗಿದ್ದು ಈ ಎಲ್ಲಾ ನಡುಗಡ್ಡೆಗಳು ಜಗತ್ತಿನ ಪ್ರಮುಖ ವೋಲ್ಕಾನೋ ಅಧ್ಯಯನ ಕೇಂದ್ರಗಳಾಗಿವೆ. 15ನೇ ಶತಕದಿಂದೀಚೆಗೆ ಇಲ್ಲಿ 14 ವೋಲ್ಕಾನೋ ಸ್ಪೋಟಗಳಾಗಿದ್ದು ತೀರ ಇತ್ತೀಚಿನದೆಂದರೆ 1971 ರಲ್ಲಿ ಲಾ ಪಲ್ಮಾ ನಡುಗಡ್ಡೆಯಲ್ಲಿ ಸಂಭವಿಸಿದ ಲಾವಾ ಸ್ಫೋಟ. ಇಲ್ಲಿ ಇಂದಿಗೂ ಭೂಮಿಯ ಒಳಗೆ ಕುದಿಯುವ ಮಾಗ್ಮಾ ಚಟುವಟಿಕೆಗಳು ನಡೆಯುತ್ತಲೇ ಇದೆ. ಲಂಜಾರೋಟ್ ನಡುಗಡ್ಡೆಯಲ್ಲಿರುವ ಟಿಮನಫಾಯಾ ನ್ಯಾಷನಲ್ ಪಾರ್ಕ್ ಎಂಬ ವೋಲ್ಕಾನೋ ಪ್ರದೇಶಕ್ಕೆ ಬರಬೇಕೆಂದರೆ ಸ್ವಲ್ಪ ದುಬಾರಿಯ ಪ್ರವೇಶ ಶುಲ್ಕ ನೀಡಿ ಅವರದೇ ಆದ ಬಸ್ ನಲ್ಲಿಯೇ ಬರಬೇಕು. ಬರುವ ಹಾದಿ ಕೂಡ ಮಣ್ಣಿನ ಹಾದಿ ಹಾಗೂ ಒಂದೇ ವಾಹನ ಚಲಿಸಬಹುದಾದಂತ ಕಿರು ಹಾದಿ. ಬಸ್ ನಲ್ಲಿ ಚಲಿಸುತ್ತಿದ್ದರೆ ಸುತ್ತಲೂ ದೃಷ್ಟಿ ಹಾಯಿಸಿದಷ್ಟಕ್ಕೂ ಕಾಣುವುದು ಲಾವಾದಿಂದ ಸುಟ್ಟು ಕರಕಲಾದ ಕಪ್ಪು ಮಣ್ಣು ಮತ್ತು ಮರಳ ದಿಬ್ಬಗಳು ಹಾಗೂ ಬಯಲು. ಈ ಲಾವಾ ಪರ್ವತಗಳನ್ನು ನ್ಯಾಷನಲ್ ಪಾರ್ಕ್ ಎಂದು ಹೆಸರಿಸಿ ಪ್ರವಾಸಿ ತಾಣವಾಗಿ ಪರಿವರ್ತಿಸಲಾಗಿದೆ. ಅವರದೇ ಬಸ್ ನಲ್ಲಿ ಸುಮಾರು ಒಂದು ಗಂಟೆಗಳ ಕಾಲ ಪ್ರಯಾಣಿಸಿ ಲಾವಾ ಬೆಟ್ಟದ ತುದಿ ತಲುಪಿದಾಗ ಸುತ್ತಲೂ ದೃಷ್ಟಿ ನಿಲುಕುವವರೆಗೂ ಕಾಣುವುದು ಬರೀ ಕಪ್ಪು ಮಣ್ಣು ಕಲ್ಲುಗಳ ರಾಶಿಗಳ ಬಯಲು, ನಡುನಡುವೆ ಲಾವಾ ಸ್ಫೋಟ ನಿರ್ಮಿಸಿದ ಗುಂಡಿಗಳು, ಸುರಂಗಗಳು ಹಾಗೂ ಚಿಕ್ಕ ಪುಟ್ಟ ದಿಬ್ಬಗಳು. ಈ ಲಾವಾ ಪರ್ವತದ ಕೇಂದ್ರದಲ್ಲಿ ಅಂದರೆ ಲಾವಾ ಉಕ್ಕಿದ್ದ ಜಾಗದಲ್ಲಿ ಒಳಗಡೆ ಇನ್ನೂ ಕುದಿಯುತ್ತಿರುವ ಮಾಗ್ಮಾ ದ ಬಗ್ಗೆ ಮಾಹಿತಿ ನೀಡಲು ಹಲವಾರು ಪ್ರಯೋಗಗಳನ್ನು ಮಾಡಿ ತೋರಿಸುತ್ತಾರೆ. ಲಾವಾ ಸ್ಫೋಟಗೊಂಡಿದ್ದ ಜಾಗದ ಮಧ್ಯ ಬಿಂದುವಿನಲ್ಲಿ ಒಂದು ಅಡಿ ಆಳದ ಗುಂಡಿ ತೊಡಿದ್ದಾರೆ. ಆ ಗುಂಡಿಯೊಳಗಿನ ಕಲ್ಲುಗಳು ಎಷ್ಟು ಬಿಸಿಯಾಗಿವೆಯೆಂದರೆ ಒಣಗಿದ ಹುಲ್ಲು ಹಾಕಿದೊಡನೆ ಬೆಂಕಿ ಹತ್ತಿಕೊಳ್ಳುತ್ತದೆ. ಅಲ್ಲಿಯೇ ಪಕ್ಕದಲ್ಲಿ ಸುಮಾರು 5 ಅಡಿಗಳಷ್ಟು ಆಳದ ಕೊಳವೆ ಬಾವಿ ಮಾಡಿದ್ದಾರೆ. ಆ ಕೊಳವೆ ಬಾವಿಯೊಳಗೆ ಒಂದು ಬಕ್ಕೆಟ್ ನೀರು ಸುರಿಯುತ್ತಾರೆ. ನೀರು ಸುರಿಯುತ್ತಲೇ ಬಗ್ಗನೇ ನೀರಿನ ಬುಗ್ಗೆ ಮೇಲೆದ್ದು ಸ್ಪೋಟಗೊಳ್ಳುತ್ತದೆ. ಭೂಮಿಯೊಳಗಿನ ಕಾವಿನಿಂದಾಗಿ ನೀರು ಬುಗ್ಗೆ ಏಳುತ್ತದೆ. ಅಲ್ಲಿಯೇ ಸ್ವಲ್ಪ ಮುಂದೆ ಅಗಲ ಬಾಯಿಯ ಒಂದು ಬಾವಿ ತೆಗೆದಿದ್ದಾರೆ. ಆ ಬಾವಿಯ ಸುತ್ತಲೂ ರಿಂಗ್ ಹಾಕಿ ಮೇಲಕ್ಕೆ ಗ್ರೀಲ್ಸ್ ಹಾಕಿ ಬಾವಿಯನ್ನು ಕವರ್ ಮಾಡಿದ್ದಾರೆ. ಆ ಗ್ರೀಲ್ಸ್ ನ ಮೇಲೆ ಚಿಕನ್ ಹಾಗೂ ಇನ್ನಿತರ ತಿನಿಸುಗಳನ್ನು ಬೇಯಿಸುತ್ತಾರೆ. ಈ ತಿಂಡಿಗಳು ಬೇಯುವುದು ಬಾವಿಯೊಳಗಿನ ಲಾವಾದ ಶಾಖದಿಂದ! ಲಾವಾದ ಶಾಖದಿಂದ ಬೇಯಿಸಿದ ತಿಂಡಿ ತಿನ್ನಲು ಅಲ್ಲಿಯೇ ನಿರ್ಮಿಸಿರುವ ಪುಟ್ಟ ರೆಸ್ಟೋರಂಟ್ ಕೂಡ ತನ್ನ ವಿಶಿಷ್ಟ ಆಕೃತಿಯಿಂದ ಮನಸೆಳೆಯುತ್ತದೆ. ಲಾವಾ ಪರ್ವತದಿಂದ ಮರಳಿ ಬರುವಾಗ ತಗ್ಗಿನಲ್ಲಿ ಕಪ್ಪು ಮಣ್ಣಿನ ಆ ಬಯಲಿನಲ್ಲಿ ಸುತ್ತಿ ಬಳಸಿ ಸಾಗುವ ಈ ಕಿರಿದಾದ ದಾರಿ ಒಂದು ತುದಿಯಿಂದ ಇನ್ನೊಂದು ತುದಿಯನು ಹುಡುಕುತ್ತಾ ಗೆರೆ ಎಳೆಯುವ ಮಕ್ಕಳ ಆಟವನ್ನು ನೆನಪಿಸಿತ್ತು!.  

ಜನಜೀವನ ಹಾಗೂ ಪ್ರವಾಸೋದ್ಯಮ

 ಪ್ರವಾಸೋದ್ಯಮದಿಂದಲೇ ಇಲ್ಲಿನ ಜನಜೀವನ. ಕೆನರಿ ಐಲಾಂಡ್ ನಲ್ಲಿ ಕೈಗಾರಿಕೋದ್ಯಮಗಳಾಗಲಿ, ವ್ಯವಸಾಯ ಬೇಸಾಯಗಳಾಗಲಿ ತುಂಬಾ ಕಡಿಮೆ. ಇಲ್ಲಿನ ಎಲ್ಲ ಜನಜೀವನ ಹಾಗೂ ಚಟುವಟಿಕೆಗಳು ಪ್ರವಾಸಿಗರಿಂದಲೇ ಹಾಗೂ ಪ್ರವಾಸಿಗರಿಗಾಗಿಯೇ.! ಪ್ರವಾಸೋದ್ಯಮವೇ ಇಲ್ಲಿನ ಜೀವಾಳ. ಹಾಗಾಗಿ ಇಲ್ಲಿ ಆಹಾರವಷ್ಟೇ ಅಲ್ಲ ಸಕಲ ಸರಂಜಾಮುಗಳೂ ಜೀವನಾವಶ್ಯಕ ವಸ್ತುಗಳೂ ಹೊರಗಿನಿಂದಲೇ ಅಮದಾಗಿ ಬರುತ್ತವೆ. ಇಲ್ಲಿ ರಫ್ತು ಮಾಡುವಷ್ಟು ಪ್ರಮಾಣದಲ್ಲಿ ಬೆಳೆಯುವ ಏಕೈಕ ಉತ್ಪನ್ನವೆಂದರೆ ಬಾಳೆ ಹಣ್ಣು. ಇತ್ತೀಚಿನ ವರ್ಷಗಳಲ್ಲಿ ಟೊಮಾಟೊ ಕೂಡ ಪ್ರಮುಖ ಬೆಳೆ. ಜೊತೆಗೆ ಬಟಾಟೆ, ದ್ರಾಕ್ಷಿ ಹಾಗೂ ಇನ್ನೂ ಹಲವು ತರಕಾರಿಗಳು ಮತ್ತು ಹಣ್ಣುಗಳನ್ನು ಬೆಳೆಯುತ್ತಾರೆ. ವಿಸ್ಕಿ, ಬೀರ್ ಮತ್ತಿತರ ಮಾದಕ ದೃವ್ಯ ತಯಾರಿಸುವ ಘಟಕಗಳು ಅಲ್ಲಲ್ಲಿ ಕಾಣಸಿಗುತ್ತವೆ. ಅಷ್ಟೇ ಅಲ್ಲದೇ, ಕೆನರಿ ಐಲ್ಯಾಂಡ್ ನ ಹೀಯರೊ ಮತ್ತು ಗೋಮೇರೋ ದ್ವೀಪಗಳಲ್ಲಿ ಚಿಕ್ಕ ಪುಟ್ಟ ಕಾಡುಗಳೂ ಇದ್ದು ಈ ಕಾಡುಗಳಲ್ಲಿ ಹಲವು ಜೀವ ವೈವಿಧ್ಯತೆಯನ್ನೂ ಕಾಣಬಹುದಾಗಿದೆ. ದಟ್ಟ ಹಸಿರು ಹಾಗೂ ವೈವಿದ್ಯಮಯ ಬಣ್ಣಗಳಿಂದ ಶೋಭಿಸುವ ಈ ಕಾಡುಗಳಲ್ಲಿ ಚಾರಣದ ವ್ಯವಸ್ಥೆಯೂ ಇದೆ. ಸಮುದ್ರ ದಡದ ಉದ್ದಕ್ಕೂ ಹಾಲಿಡೇ ಹೋಮ್ ಗಳು, ಹೊಟೇಲ್ ಗಳು, ರೆಸಾರ್ಟ್ ಗಳ ಸಾಲು ಹಾಗೂ ನಡುಗಡ್ಡೆಯ ಒಳಗೆ ಕಾಣಸಿಗುವುದು ಅಂಗಡಿಗಳು ಮತ್ತು ಮಾರುಕಟ್ಟೆಗಳು, ಇಲ್ಲಿಯ ನಿವಾಸಿಗಳ ಮನೆಗಳು, ರೇಸ್ಟೌರಂಟ್ ಗಳು ಹಾಗೂ ಪಬ್ ಗಳು. ಐಲಾಂಡ್ ಉದ್ದಕ್ಕೂ ನೋಡಸಿಗುವ ಸುಂದರ ರಸ್ತೆಗಳು, ಪುಟ್ಟ ಪುಟ್ಟ ಪಾರ್ಕ್ ಗಳು, ವ್ಯವಸ್ತಿತ ಮಾರುಕಟ್ಟೆಗಳು ಮತ್ತು ಸಾರಿಗೆ ವ್ಯವಸ್ತೆ ಅಚ್ಚುಕಟ್ಟುತನಕ್ಕೆ ಮಾದರಿ ಎನ್ನುವಂತಿವೆ. ಬೀಚ್ ಗಾಗಿ ಬಿಸಿಲಿಗಾಗಿ ಹಾತೊರೆಯುವ ಪಶ್ಚಿಮಾತ್ಯ ದೇಶಗಳ ಪ್ರವಾಸ ಪ್ರಿಯರಿಗೆ ವರ್ಷದಲ್ಲಿ 12 ತಿಂಗಳುಗಳೂ ಹಿತವಾದ ವಾತಾವರಣವಿರುವ ಈ ಕೆನರಿ ಐಲಾಂಡ್ಸ್ ಮೆಚ್ಚಿನ ತಾಣ. ಅಲ್ಲದೇ, ಸೀ ಡೈವಿಂಗ್, ಸರ್ಫಿಂಗ್, ಸೇಲಿಂಗ್, ವಿಂಡ್ ಸರ್ಫಿಂಗ್, ಸೀ ಸಫಾರಿ, ಬೊಟಿಂಗ್, ಪ್ಯಾರಾ ಗ್ಲೈಡಿಂಗ್, ಹೈಕಿಂಗ್, ಮೌಂಟೇನ್ ಬೈಕಿಂಗ್, ರಾಕ್ ಕ್ಳೈಂಬಿಂಗ್, ಸೈಕ್ಲಿಂಗ್ ಮುಂತಾದ ಹತ್ತು ಹಲವು ರೀತಿಯ ಸಾಹಸ ಕ್ರೀಡೆಗಳು, ಹಲವು ಬಗೆಯ ವಾಟರ್ ಗೇಮ್ಸ್, ವಾಟರ್ ಪಾರ್ಕ್ಸ್ ಗಳು ಪ್ರವಾಸಿಗರಿಗೆ ಬೋರ್ ಆಗದಂತೆ ಮನರಂಜನೆ ನೀಡುತ್ತವೆ. ಇಲ್ಲಿ ಬರುವ ಹೆಚ್ಚಿನ ಪ್ರವಾಸಿಗರು ಕನಿಷ್ಠ 8 ರಿಂದ 15 ದಿನಗಳವರೆಗೆ ಉಳಿಯುವ ಪ್ಲಾನ್ ಮಾಡಿಯೇ ಬರುತ್ತಾರೆ. ಅಷ್ಟು ದಿನಗಳು ಉಳಿದರೂ ಮರಳಿ ಹೊರಟು ನಿಂತಾಗ ಮುಂದೆ ಎಂದಾದರೂ ಮತ್ತೊಮ್ಮೆ ಬರಬೇಕು ಎಂದೆನಿಸುವಂತೆ ಮಾಡುವ ಈ ಕೆನರಿ ಐಲಾಂಡ್ ನ ಪ್ರವಾಸ ಮರೆಯಲಾರದ ಒಂದು ವಿಭಿನ್ನ ಅನುಭವ ನೀಡುವುದರಲ್ಲಿ ಸಂಶಯವಿಲ್ಲ.

 -- ಚೇತನಾ ನಂಜುಂಡ್ ಚಿತ್ರಗಳು : ನಂಜುಂಡ್ ಭಟ್