Friday, April 18, 2014

My Article in Vijaya Vani on 17th April 2014


http://epapervijayavani.in/Details.aspx?id=12977&boxid=153222511

 

Page -17

http://epapervijayavani.in/epapermain.aspx?queryed=9&eddate=4%2f17%2f2014 

 

ಏನಿದು ‘ಈಸ್ಟರ್ ಎಗ್ ಹಂಟ್’? – ಈಸ್ಟರ್ ಹಬ್ಬದ ಮನೆಯೊಳಗೊಂದಿಷ್ಟು  ಹೊತ್ತು.
ಜಗತ್ತಿನ ಹಲವು ಭಾಗಗಳಲ್ಲಿ ಈಗ ಈಸ್ಟರ್ ಸಂಭ್ರಮ. ನಾವಿರುವ ಈ ಲಂಡನ್ ನಗರದಲ್ಲಂತೂ ಮಾರ್ಕೆಟ್ ಗಳಲ್ಲಿ ಶಾಪ್ ಗಳಲ್ಲಿ ಎಲ್ಲೆಡೆಯೂ ಈಸ್ಟರ್ ಎಗ್ಸ್(ಮೊಟ್ಟೆ), ಈಸ್ಟರ್ ಬನ್ನಿ(ಮೊಲ) ಗಳದೇ ಕಾರುಬಾರು. ಬಣ್ಣ ಬಣ್ಣದ ಪೇಪರ್ ಗಳಿಂದ ಪೇಯಿಂಟ್ ಗಳಿಂದ ಅಲಂಕರಿಸಿಕೊಂಡ ಎಗ್ ಗಳು, ಎಗ್ ಬಾಸ್ಕೆಟ್ ಗಳು, ಈಸ್ಟರ್ ಬನ್ನಿಗಳು ಶಾಪ್ ಗಳ ಮುಂದೆಯೇ ಬಂದು ಕುಳಿತು ಕಣ್ಣು ಮಿಟುಕಿಸುತ್ತವೆ. ಮಕ್ಕಳಿರಲಿ ಹಿರಿಯರಿರಲಿ ತಮ್ಮಡೆಗೆ ಒಂದು ನೋಟ ಬೀರದೆ ಮುಂದೆ ಹೋಗದಂತೆ ತಡೆದು ಮಕ್ಕಳಲ್ಲಿ ಆಸೆ ಮೂಡಿಸಿ ಅಲ್ಲಿಯೇ ವ್ಯಾಪಾರ ಕುದುರುತ್ತಲೇ ಮಕ್ಕಳ ಮುಖದ ಮಿನುಗುವ ನಗೆಯಲ್ಲಿ ತಮ್ಮ ಬಣ್ಣ ಬೆರೆಸುತ್ತವೆ.  ಶಾಪ್ ಗಳಲ್ಲಿ ಸಿಗುವ ಈ ಚಂದ ಚಂದವಾಗಿ ಅಲಂಕೃತಗೊಂಡ ಎಗ್ ಗಳಲ್ಲಿರುವುದು ಹೆಚ್ಚಾಗಿ ಮಿಲ್ಕ್ ಚಾಕ್ಲೆಟ್ ಗಳು. ಹಿಂದಿನ ಕಾಲದಲ್ಲಿ ನಿಜವಾದ ಮೊಟ್ಟೆಗಳನ್ನೇ ಬಳಸಲಾಗುತ್ತಿತ್ತಾದರೂ ಈಗ ಎಲ್ಲೆಡೆ ಬಳಸಲ್ಪಡುವುದು ಚಾಕ್ಲೆಟ್ ಎಗ್ ಗಳೇ. ಮೊಟ್ಟೆಯ ಆಕಾರದಲ್ಲಿ ತಯಾರಿಸಲ್ಪಟ್ಟು ವಿಧ ವಿಧವಾಗಿ ಸಿಂಗರಿಸಲ್ಪಟ್ಟ ಈ ಚಾಕೋಲೇಟ್ ಗಳನ್ನು ಈಸ್ಟರ್ ಹಬ್ಬದ ದಿನ ಆಚರಿಸಲ್ಪಡುವ "ಎಗ್ ಹಂಟ್" (ಮೊಟ್ಟೆ ಹುಡುಕುವ ಆಟ) ಎಂಬ ಆಟಕ್ಕಾಗಿ ಬಳಸಲ್ಪಡುತ್ತವೆ. ಈಸ್ಟರ್ ಬನ್ನಿ(ಮೊಲ) ಈಸ್ಟರ್ ನ ಮುಂಚಿನ ರಾತ್ರಿಯೇ ಬಂದು ಮನೆಯೊಳಗೆ ಮತ್ತು ಗಾರ್ಡನ್ ಗಳಲ್ಲಿ ಬೇರೆ ಬೇರೆ ಕಡೆ ಹಲವು ಎಗ್ ಗಳನ್ನು ಅಡಗಿಸಿಟ್ಟಿದೆ ಎಂದು ಮಕ್ಕಳಿಗೆ ಕಥೆ ಹೇಳುತ್ತಾ ಹಬ್ಬದ ದಿನ ಬೆಳಿಗ್ಗೆ ಆ ಎಗ್ ಗಳನ್ನು ಹುಡುಕಲು ಹೇಳುತ್ತಾರೆ. ಯಾರು ಅತೀ ಹೆಚ್ಚು ಎಗ್ ಗಳನ್ನು ಹುಡುಕಿ ತರುತ್ತಾರೋ ಅವರಿಗೆ ಗಿಫ್ಟ್. ಜೊತೆಗೆ ಆ ಎಗ್ ಗಳಲ್ಲಿರುವ ಚಾಕ್ಲೆಟ್ ಗಳನ್ನು ತಿನ್ನುವುದೇ ಮಕ್ಕಳಿಗೆ ಒಂದು ಮಜಾ. ಶಾಲೆಗಳಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳು ಕೂಡ ಈಸ್ಟರ್ ನ ಪ್ರಯುಕ್ತವಾಗಿ ಈ ಎಗ್ ಹಂಟ್ ಆಟವನ್ನು ಏರ್ಪಡಿಸುತ್ತವೆ. ಎಗ್ ಹಂಟ್ ಆಟವಷ್ಟೇ ಅಲ್ಲದೇ ಎಗ್ ರೋಲ್ಲಿಂಗ್, egg tapping ಹೀಗೆ ಎಗ್ ಗಳನ್ನೊಳಗೊಂಡ ಇನ್ನೂ ಹಲವು ಆಟಗಳು ಈಸ್ಟರ್ ನಲ್ಲಿ ಆಡಲ್ಪಡುತ್ತವೆ.
ಈ ಈಸ್ಟರ್ ಬನ್ನಿ, ಎಗ್ ಹಂಟ್ ನ  ಆಟ ಈಸ್ಟರ್ ಹಬ್ಬದ ಆಚರಣೆಯಲ್ಲಿ ಹೇಗೆ ಮತ್ತು ಯಾಕೆ ಬಂತು ಎಂಬುದರ ಬಗ್ಗೆ ಬೇರೆ ಬೇರೆಯದೇ ಆದ ಹಲವು ನಂಬಿಕೆಗಳಿವೆ. ಬೇರೆ ಬೇರೆ ಕಥೆಗಳಲ್ಲಿ ಬೇರೆ ಬೇರೆಯೇ ದೃಷ್ಟಿಕೋನದಿಂದ ಇವುಗಳ ಬಳಕೆಯನ್ನು ನೋಡಲಾಗಿದೆ. ಒಂದು ನಂಬಿಕೆಯ ಪ್ರಕಾರ ಎಗ್ ನ್ನು ಜೀವೋತ್ಪತ್ತಿಯ ಸಂಕೇತವಾಗಿ ಹಾಗೂ ಮೊಲವನ್ನು ವಸಂತದ ಹೊಸ ಚಿಗುರಿನ ಉತ್ಸಾಹದ ಪ್ರತೀಕವಾಗಿ ಈ ಹಬ್ಬದಲ್ಲಿ ಗುರುತಿಸಿಕೊಂಡಿವೆ ಎನ್ನುತ್ತಾರೆ. ಇದರಲ್ಲೇ ಇನ್ನೊಂದು ನಂಬಿಕೆಯೆಂದರೆ ಜೀಸಸ್ ಕ್ರೈಸ್ಟ್ ಅವರು ಶಿಲುಬೆಗೇರಿಸಿದ ನಂತರ ತಮ್ಮ ದೇಹಕ್ಕೆ ಮರಳಿ ಬಂದು ಮರು ಜನ್ಮ ಪಡೆದುದರ ಪ್ರತೀಕವಾಗಿ ಆಚರಿಸಲ್ಪಡುವ ಈ ಹಬ್ಬದಲ್ಲಿ ಜೀವೋತ್ಥಾನದ ಸಂಕೇತವಾಗಿ ಮೊಟ್ಟೆಯನ್ನು ಈ ಹಬ್ಬದಲ್ಲಿ ಬಳಸಲಾಗುತ್ತದೆ ಎಂಬುದು. ಇನ್ನೊಂದು ನಂಬಿಕೆಯ ಪ್ರಕಾರ ಜೀಸಸ್ ರ ಮೃತದೇಹವನ್ನು ಒಂದು ಗುಹೆಯಲ್ಲಿ ಇಡಲಾಗಿತ್ತು. ಆದರೆ ಮರುದಿನ ಜೀಸಸ್ ರು ಮತ್ತೆ ದೇಹ ಪ್ರವೇಶಿಸಿ ಅಲ್ಲಿಂದ ಹೊರಟು ಹೋಗಿದ್ದು ಆ ಗುಹೆಯೊಳಗಿಂದ ಅವರ ದೇಹ ಕಾಣದಾಗಿ ಖಾಲಿಯಾದ ಗುಹೆ ಕಾಣಿಸಿದ್ದರಿಂದ ಈ ಎಗ್ ನ್ನು ಖಾಲಿ ಗುಹೆಗೆ ಹೋಲಿಸಿ ಈಸ್ಟರ್ ಹಬ್ಬಗಳಲ್ಲಿ ಬಳಸಲಾಗುತ್ತದೆ ಎಂಬ ನಂಬಿಕೆಯೂ ಇದೆ. ಹಾಗೆಯೇ ಮೊಲದ ಬಗೆಗಿರುವ ಕತೆಯೆಂದರೆ ಜೀಸಸ್ ರ ಗೆಳೆಯನಾಗಿದ್ದ ಒಂದು ಪುಟ್ಟ ಮೊಲ ಅವರನ್ನು ಶಿಲುಬೆಗೇರಿಸಿದ ವಿಷಯ ತಿಳಿಯದೆ ಅವರಿಗಾಗಿ ಮೂರು ದಿನಗಳ ಕಾಲ ಕಾಯುತ್ತಿತ್ತು. ಈಸ್ಟರ್ ನ ದಿನ ಬೆಳಿಗ್ಗೆ ಜೀಸಸ್ ರು ಮತ್ತೆ ಜೀವ ತಳೆದು ಕಾಯುತ್ತಿದ್ದ ಮೊಲವನ್ನು ನೋಡಲು ಹೂದೋಟಕ್ಕೆ ಹೋದರು. ಜೀಸಸ್ ರ ಶಿಷ್ಯರು ಬಂದು ನೋಡಿದಾಗ ಅವರು ತಮ್ಮ ಮೊಲದ ಜೊತೆಗೆ ನಡೆದಲ್ಲೆಲ್ಲಾ ಮೊಲದ ಆಕಾರ ಹೋಲುವ ಹೂಗಳು ಅರಳಿದ್ದವು ಎಂಬುದು. ಹಾಗಾಗಿ ಜೀಸಸ್ ರು ಮರು ಜನ್ಮ ಪಡೆದ ದಿನದ ಈ ಹಬ್ಬದಲ್ಲಿ ಮೊಲ ಅಂದರೆ ಈಸ್ಟರ್ ಬನ್ನಿ ಮಕ್ಕಳಿಗೆಲ್ಲರಿಗೂ ಚಾಕೋಲೇಟ್ ಹಾಗೂ ಸಿಹಿ ಹಂಚುವುದು ಎಂಬ ಕಥೆಯೂ ಇದೆ.
ಈಸ್ಟರ್ ಹಬ್ಬದ ಧಾರ್ಮಿಕ ಆಚರಣೆಗಳು
ಈಸ್ಟರ್ ಕ್ರೈಸ್ತರು ಆಚರಿಸುವ ಒಂದು ಪ್ರಮುಖ ಧಾರ್ಮಿಕ ಹಬ್ಬ. ಪ್ರತಿ ವರ್ಷ ಹೆಚ್ಚಾಗಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಆಚರಿಸಲ್ಪಡುವ ಈಸ್ಟರ್ ಕ್ರೈಸ್ತರ ಆರಾದ್ಯ ದೈವ ಜೀಸಸ್ ರ ಪುನರುತ್ಥಾನದ ದ್ಯೋತಕವಾಗಿ ಜಗತ್ತಿನಾದ್ಯಂತ ಆಚರಿಸಲ್ಪಡುತ್ತದೆ. ಜೀಸಸ್ ರ ಪುನರುತ್ಥಾನ ಕ್ರೈಸ್ತ ಧರ್ಮದ ಧಾರ್ಮಿಕ ಕಥೆಯಲ್ಲಿ ಬಹಳ ಪ್ರಮುಖ ಘಟನೆ. ಜೀಸಸ್ ರಿಗೆ ಮರಣ ದಂಡನೆ ವಿಧಿಸಿ ಶಿಲುಬೆಗೇರಿಸಿದ ನಂತರ ಅವರು ತಮ್ಮ ಶರೀರವನ್ನು ತೊರೆದರೂ ಇದಾದ ನಂತರದ ಮೂರನೆಯ ದಿನ ಅವರು ತಮ್ಮ ಶರೀರಕ್ಕೆ ಮರಳಿ ಬಂದು ಮರುಜೀವನ ಹೊಂದಿದ ಸಂಭ್ರಮಕ್ಕಾಗಿ ಅವರು ಮತ್ತೆ ಜೀವ ತಳೆದ ದಿನವನ್ನು ಈಸ್ಟರ್ ಹಬ್ಬವಾಗಿ ಆಚರಿಸಲಾಗುತ್ತದೆ ಎಂಬುದು ಈಸ್ಟರ್ ಆಚರಣೆಯ ಹಿಂದಿನ ಕಥೆ. ಗುಡ್ ಫ್ರೈಡೆ ಎಂದು ಆಚರಿಸಲಾಗುತ್ತಿರುವುದು ಜೀಸಸ್ ರನ್ನು ಶಿಲುಬೇಗಿರಿಸಿದ ದಿನ. ಅಂದರೆ ಈಸ್ಟರ್ ಹಬ್ಬದ ಮುಂಚಿನ ಶುಕ್ರವಾರವನ್ನು ಗುಡ್ ಫ್ರೈಡೆ ಯಾಗಿ ಆಚರಿಸುತ್ತಾರೆ. ಶುಕ್ರವಾರದಂದು ಶಿಲುಬೇಗೆರಿಸಲ್ಪಟ್ಟು ದೇಹ ತ್ಯಜಿಸಿದ ಜೀಸಸ್ ರು ಭಾನುವಾರದಂದು ಮತ್ತೆ ದೇಹಕ್ಕೆ ಮರಳುತ್ತಾರೆ. ಹಾಗಾಗಿ ಈಸ್ಟರ್ ಸದಾ ಭಾನುವಾರದಂದು ಆಚರಿಸಲ್ಪಡುತ್ತದೆ.
ಈಸ್ಟರ್ ಹಬ್ಬಕ್ಕೆ ಮುಂಚೆ ನಲವತ್ತು ದಿನಗಳು ಅಂದರೆ ಸುಮಾರು ಆರು ವಾರಗಳ ಕಾಲ “ಲೆಂಟ್ ಅಥವಾ ಗ್ರೇಟ್ ಲೆಂಟ್” ಎಂದು ಆಚರಿಸಲಾಗುತ್ತದೆ. ಈ ಅವಧಿಯ ಮುಖ್ಯ ಆಚರಣೆ ಉಪವಾಸ ಹಾಗೂ ಪ್ರಾರ್ಥನೆ. ಕೆಲವು ಆಹಾರಗಳನ್ನು ಅಂದರೆ ಮೊಟ್ಟೆ, ಮಾಂಸ, ಎಣ್ಣೆ, ಮಾದಕ ದ್ರವ್ಯಗಳು ಹಾಗೂ ಹೈನು ಪದಾರ್ಥಗಳನ್ನು ಅಂದರೆ ಡೈರಿ ಉತ್ಪನ್ನಗಳನ್ನು ವರ್ಜಿಸಲಾಗುತ್ತದೆ. ಈ ಆಚರಣೆಯ ಉದ್ದೇಶ ಜೀಸಸ್ ರ ತ್ಯಾಗಕ್ಕೆ ಗೌರವ ಸಲ್ಲಿಸುವುದಷ್ಟೇ ಅಲ್ಲ ಮನುಷ್ಯರು ತಮ್ಮನ್ನು ತಾವು ಪರೀಕ್ಷೆಗೊಳಪಡಿಸಿಕೊಳ್ಳುವ ಮೂಲಕ, ಪ್ರಾರ್ಥನೆಯ ಮೂಲಕ ತಮ್ಮನ್ನು ತಾವು ಉತ್ತಮಗೊಳಿಸಿಕೊಳ್ಳಲು ಪ್ರೇರೇಪಿಸುತ್ತದೆ ಈ ಲೆಂಟ್ ಆಚರಣೆ ಎಂದು ಕ್ರೈಸ್ತ ಧರ್ಮದ ಪುರಾಣ ಕಥೆಗಳು ಹೇಳುತ್ತವೆ. ಹಾಗಾಗಿ ಈ ಅವಧಿಯಲ್ಲಿ ಜನರು ದೇವರ ಪ್ರಾರ್ಥನೆ, ಧ್ಯಾನ, ಪವಿತ್ರ ಗ್ರಂಥಗಳ ಪಠಣ, ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಈ ಗ್ರೇಟ್ ಲೆಂಟ್ ನ್ನು ಆಚರಿಸುತ್ತಾರೆ. ಅಷ್ಟೇ ಅಲ್ಲದೇ, ತಮ್ಮನ್ನು ತಾವು ದೇವರಲ್ಲಿ ಸಂಪೂರ್ಣ ಶರಣಾಗತರಾಗಿ, ತಪ್ಪೊಪ್ಪಿಗೆ ಮಾಡಿಕೊಳ್ಳುವುದು, ತಾವು ಮಾಡಿದ ಯಾವುದೇ ತಪ್ಪುಗಳಿಗೆ ಪಶ್ಚಾತ್ತಾಪ ಪಡುವುದು, ತಮ್ಮಿಂದ ಎಸಗಲ್ಪಟ್ಟ ತಪ್ಪನ್ನು ಸರಿ ಪಡಿಸಲು ಕೋರಿಕೊಳ್ಳುವುದು ಈ ಎಲ್ಲಾ ಸದಾಚಾರಗಳನ್ನು ಪ್ರೇರೇಪಿಸುತ್ತದೆ ಈ ಲೆಂಟ್ ಆಚರಣೆ. ಈ ಲೆಂಟ್ ಆಚರಣೆ ಈಸ್ಟರ್ ನ ಮುಂಚಿನ ಪವಿತ್ರ ಗುರುವಾರದಂದು ಮುಕ್ತಾಯಗೊಳ್ಳುತ್ತದೆ. ಜೀಸಸ್ ರು ಶಿಲುಬೇಗೆರುವ ಮುನ್ನ ಕೊನೆಯ ಊಟ ಮಾಡಿದ್ದು ಗುರುವಾರವಾದ್ದರಿಂದ ಈಸ್ಟರ್ ಹಬ್ಬದ ಮುಂಚಿನ ಗುರುವಾರವನ್ನು ಪವಿತ್ರ ಗುರುವಾರ(Holy Thursday) ಎಂಬ ಹೆಸರಿನಿಂದ ಆಚರಿಸುತ್ತಾರೆ. ಈಸ್ಟರ್ ಹಬ್ಬದಲ್ಲಿ ಆಚರಿಸಲ್ಪಡುವ ಮೂರು ಪ್ರಮುಖ ದಿನಗಳು ಹೋಲಿ ಥರ್ಸ್ ಡೇ, ಗುಡ್ ಫ್ರೈಡೆ, ಹಾಗೂ ಈಸ್ಟರ್ ಸಂಡೇ. ಗುಡ್ ಫ್ರೈಡೆಯಂದು ಜೀಸಸ್ ರನ್ನು ಶಿಲುಬೆಗೇರಿಸಿದ ದಿನವೆಂದು ಚರ್ಚ್ ಗಳಲ್ಲಿ ಶೋಕಾಚರಣೆ ನಡೆಯುತ್ತದೆ. ಮರುದಿನ ಪವಿತ್ರ ಶನಿವಾರದಂದು ರಾತ್ರಿ ಜಾಗರಣೆ ಮಾಡಿ ಕ್ಯಾಂಡಲ್ ಗಳನ್ನು ಉರಿಸಲಾಗುತ್ತದೆ. ಅಂದರೆ ಹೊಸಬೆಳಕು ಮೂಡುವ ಧ್ಯೋತಕವಾಗಿ ದೀಪ ಬೆಳಗಲಾಗುತ್ತದೆ. ಹಲವು ಪ್ರಾದೇಶಿಕ ಆಚರಣೆಗಳಲ್ಲಿ ಈಸ್ಟರ್ ಮುಂಚಿನ ದಿನವಾದ ಶನಿವಾರದಂದು ತಮ್ಮ ಪೂರ್ವಜರ ಬಂಧು ಬಳಗದವರ ಹಾಗೂ ಸ್ನೇಹಿತರ ಸಮಾಧಿಗಳಿಗೆ ಹೂಗಳಿಂದ ಅಲಂಕರಿಸಿ ಪೂಜೆ ನಡೆಸುವ ಸಂಪ್ರದಾಯವೂ ಇದೆ. ಶನಿವಾರ ರಾತ್ರಿಯ ಜಾಗರಣೆ ಮಾಡಿ ಭಾನುವಾರ ಸೂರ್ಯೋದಯಕ್ಕೂ ಮುನ್ನ ‘ಸನ್ ರೈಸ್ ಸರ್ವಿಸ್’ ಎಂದು ಮುಂಜಾನೆಯೇ ಚರ್ಚ್ ಗಳಲ್ಲಿ ಪ್ರಾರ್ಥನೆ ನಡೆಸಲಾಗುತ್ತದೆ. ಸೂರ್ಯೋದಯಕ್ಕೂ ಮುನ್ನವೇ ಚರ್ಚ್ ನಲ್ಲಿ ಸೇರುವ ಜನಸಮೂಹ ಈಸ್ಟರ್ ಸಂಡೆಯ ಸೂರ್ಯೋದಯವನ್ನು  ಭಕ್ತಿ ಸಂಭ್ರಮಗಳಿಂದ ವೀಕ್ಷಿಸುತ್ತಾ ವಿಶೇಷ ಪ್ರಾರ್ಥನೆ  ಸಲ್ಲಿಸುತ್ತಾರೆ. ಈಸ್ಟರ್ ಸಂಡೆ ಯ ದಿನ ಚರ್ಚ್ ಗಳಲ್ಲಿ ಮೆರವಣಿಗೆ ನಡೆಯುತ್ತದೆ. ಜೀಸಸ್ ರ ದೇಹ ಹುಡುಕುವ ದ್ಯೋತಕವಾಗಿ ನಡೆಯುವ ಈ ಮೆರವಣಿಗೆ ಜೀಸಸ್ ರು ಮತ್ತೆ ತಮ್ಮ ದೇಹಕ್ಕೆ ಹಿಂದಿರುಗಿ ಪುನರ್ಜೀವನ ಹೊಂದಿದರು ಎಂಬ ಉದ್ಘೋಷದೊಂದಿಗೆ ಮೆರವಣಿಗೆ ಮುಕ್ತಾಯಗೊಳ್ಳುತ್ತದೆ. ಹಾಗೆಯೇ ಚರ್ಚ್ ಗಳಲ್ಲಿ ಹೂಗಳನ್ನು ಸಲ್ಲಿಸುವ ಮೂಲಕ ಮೋಂಬತ್ತಿ ಬೆಳಗುವುದರ ಮೂಲಕ ಜೀಸಸ್ ರ ಮರು ಹುಟ್ಟನ್ನು ಆಚರಿಸಲಾಗುತ್ತದೆ. ಮನೆಗಳಲ್ಲಿ ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ತಯಾರಿಸಿಕೊಂಡು ಬಂಧು ಮಿತ್ರರೊಡನೆ ಹಬ್ಬದ ಊಟ ಮಾಡುವ ಮೂಲಕ ಈಸ್ಟರ್ ಹಬ್ಬ ಮುಕ್ತಾಯಗೊಳ್ಳುತ್ತದೆ.
ವಸಂತದ ಶುರುವಿನಲ್ಲಿ ಆಚರಿಸಲ್ಪಡುವ ಈ ಹಬ್ಬಕ್ಕೆ ಗಿಡ ಮರಗಳಲ್ಲಿ ಆಗಷ್ಟೇ ಮೂಡುತ್ತಿರುವ ಹೊಸ ಚಿಗುರು, ಹೂ ಮೊಗ್ಗುಗಳು ಹಣ್ಣು ಹಂಪಲುಗಳು ಈ ಹಬ್ಬದ ಆಚರಣೆಯ ಹಿಂದಿನ 'ಹೊಸ ಹುಟ್ಟು ಹೊಸ ಜೀವನ' ಎಂಬ ನಂಬಿಕೆಗೆ ಪೂರಕವಾಗಿ ಸುತ್ತಲಿನ ಪರಿಸರದ ತುಂಬೆಲ್ಲಾ ಹೊಸ ಜೀವನದ ಹೊಸ ಹುರುಪಿನ ಚಿತ್ರಣ ನೀಡುವುದು ಒಂದು ವೈಶಿಷ್ಟ್ಯ ಎಂದರೆ ತಪ್ಪಾಗಲಾರದೇನೋ.
---ಚೇತನಾ ನಂಜುಂಡ್, ಲಂಡನ್

 

No comments:

Post a Comment