Tuesday, June 4, 2013

ರಷ್ಯಾದಿಂದ ಏಷ್ಯಾಗೊಂದು ತೂಗು ಸೇತುವೆ



ರಷ್ಯಾದಿಂದ ಏಷ್ಯಾ ಗೆ ಒಂದು ಸೇತುವೆ ನಿರ್ಮಿಸಿದರೆ ಹೇಗಿರುತ್ತೆ... ಇದು ನಿಜವಾಗುವ ಸೂಚನೆ ಕಂಡುಬರುತ್ತಿದೆ. ರಷ್ಯಾಕ್ಕೆ ಸೇರಿದ ಒಂದು ನಡುಗಡ್ಡೆ ರಸ್ಕಿ ಐಲ್ಯಾಂಡ್ಸ್ ಗೆ ರಷ್ಯದಿಂದ ಒಂದು ಸೇತುವೆ ನಿರ್ಮಿಸುವ ಯೋಜನೆ ಸಿದ್ದವಾಗುತ್ತಿದೆ. ಈ ಸೇತುವೆ ಆರ್ಕಿಟೆಕ್ಚರ್ ಕ್ಷೇತ್ರದಲ್ಲಿ ಒಂದು ಅದ್ಭುತವೆನಿಸಲಿದ್ದು ಜಗತ್ತಿನ ಅತೀ ಉದ್ದದ ತೂಗುಸೇತುವೆಯಾಗಲಿದೆ. 3100 ಮೀಟರ್ ಉದ್ದವಿರುವ ಹಾಗೂ ಐಫೆಲ್ ಟವರ್ ನಷ್ಟೆ ಎತ್ತರದ ಈ ಸೇತುವೆಯ ನಿರ್ಮಾಣಕ್ಕೆ 1 ಬಿಲಿಯನ್ ಡಾಲರ್ ಗಳು  ಖರ್ಚಾಗಲಿವೆ ಎಂದು ಅಂದಾಜಿಸಲಾಗಿದೆ. ಬರೀ 5000 ಜನರು ವಸತಿಯಾಗಿರುವ ಈ ನಡುಗಡ್ಡೆಗೆ ಇಷ್ಟೊಂದು ಖರ್ಚು ಮಾಡಿ ಸೇತುವೆ ನಿರ್ಮಿಸುವುದು ಮೇಲ್ನೋಟಕ್ಕೆ ಅರ್ಥಹೀನ ಎನಿಸಿದರೂ ಈ ಸೇತುವೆಯಿಂದ ಬೇರೆಯದೇ ರೀತಿಯಲ್ಲಿ ದೊಡ್ಡ ಪ್ರಮಾಣದ ಪ್ರಯೋಜನ ಪಡೆಯಬೇಕು ಎಂಬುದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯೋಚನೆ. ಈ ಯೋಜನೆಯ ಮೂಲಕ ಇಷ್ಟು ವರ್ಷಗಳ ಕಾಲ ರಷ್ಯಾ ಸರಕಾರದ ಅಲಕ್ಷ್ಯಕ್ಕೆ ಒಳಗಾದ ಪೂರ್ವ ಭಾಗದ ಗಡಿ ಪ್ರದೇಶಗಳ ಬೆಳವಣಿಗೆ ಹಾಗೂ ಏಷ್ಯಾದ ಜೊತೆಗೆ ತನ್ನ ವ್ಯಾವಹಾರಿಕ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುವ ಯೋಜನೆ ಸಿದ್ದಪಡಿಸುತ್ತಿದೆ ರಷ್ಯಾದ ಪುಟಿನ್ ಸರಕಾರ. ರಷ್ಯಾದ ಪೂರ್ವ ಗಡಿಪ್ರದೇಶದ ಸುಧಾರಣಾ ಯೋಜನೆ ಹಂತ ಹಂತವಾಗಿ ಹಲ ವರ್ಷಗಳಿಂದ ನಡೆಯುತ್ತಲೇ ಇದೆ. ಪೂರ್ವ ಗಡಿಯಲ್ಲಿರುವ ವ್ಲೋಡಿವೊಸ್ಟೋಕ್ ಪ್ರದೇಶಕ್ಕೆ ಮಾಸ್ಕೋದಿಂದ 9300 ಕಿಲೋ ಮೀಟರ್ ಗಳಷ್ಟು ಉದ್ದದ ರೈಲ್ ಲೈನ್ ನಿರ್ಮಿಸಲಾಗಿದೆ.
ಸೋವಿಯತ್ ಒಕ್ಕೂಟಗಳ ಉದ್ದ ಕಾಲದಲ್ಲಿ ಈ ವ್ಲಾಡಿವೊಸ್ತೋಕ್ ಪ್ರದೇಶ ಮಿಲಿಟರಿ ಕಾರ್ಯಾಚರಣೆಗಳ ಪ್ರಮುಖ ತಾಣವಾಗಿತ್ತು.  ತದನಂತರ ಈ ಪ್ರದೇಶ ಕೈದಿಗಳು ಹಾಗೂ ನಿರಾಶ್ರಿತರ ವಲಸೆ ಪ್ರದೇಶವಾಯ್ತು. 90 ರ ದಶಕಗಳಲ್ಲಿ ಈ ಪೂರ್ವ ಗಡಿಪ್ರದೇಶ ರಷ್ಯಾ ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಯ್ತು. ಇದರಿಂದಾಗಿ ಅಲ್ಲಿ ಸ್ಥಳೀಯ ಸ್ವಾತಂತ್ರ್ಯ ಗಲಭೆ ಶುರುವಾಯ್ತು. ಅಲ್ಲಿ ಕೆಲವು ಸಂಘಟನೆಗಳು ಆ ಪ್ರದೇಶವನ್ನು ರಷ್ಯದಿಂದ ಬೇರ್ಪಡಿಸಿ ಸ್ವತಂತ್ರ ಪ್ರದೇಶವನ್ನಾಗಿಸಲು  ಚಳುವಳಿ ಶುರುಮಾಡಿದವು. ಈ‌ಸಮಯದಲ್ಲಿ ಹೆಚ್ಚಿನ ಜನ ಆ ಪ್ರದೇಶ ತ್ಯಜಿಸಿ ಹೋದರು. ಈ ಸಂದರ್ಭದಲ್ಲಿ ಇಲ್ಲಿನ ಒಟ್ಟೂ ಜನಸಂಖ್ಯೆಯಲ್ಲಿ ಸುಮಾರು 20% ನಷ್ಟು ಜನರು ಈ ಪ್ರದೇಶ ತ್ಯಜಿಸಿ ವಲಸೆ ಹೋದರು. ಹಾಗಾಗಿ ಈಗ ಈ ಪ್ರದೇಶದ ಜನಸಂಖ್ಯೆ ಬರೀ 6 ಮಿಲಿಯನ್ ಗಳಷ್ಟು. ಚೀನಾ ದೇಶದ ಗಡಿಯಲ್ಲಿರುವ ಈ ಪ್ರದೇಶದ ಜನಸಂಖ್ಯೆ ಚೀನಾ ದೇಶದ 130 ಮಿಲ್ಲಿಯನ್ ಜನಸಂಖ್ಯೆಗೆ ಹೊಲಿಸಿದರೆ ತೀರಾ ಕಡಿಮೆ. ರಷ್ಯಾದ ಈ ರಸ್ಕಿ ಐಲ್ಯಾಂಡ್ ಸ್ವಲ್ಪ ಮಟ್ಟಿಗೆ ಚೈನೀಸ್ ಜನಸಂಖ್ಯೆಯನ್ನು ಕೂಡ ಹೊಂದಿರುವುದರಿಂದ ಈ ನಡುಗಡ್ಡೆಯನ್ನು ಚೀನಾ ಸ್ವಾಧೀನಪಡಿಸಿಕೊಳ್ಳಬಹುದು ಎಂಬ ಭಯ ಕೂಡ ರಷ್ಯಾ ದೇಶಕ್ಕೆ ಇತ್ತು. ಹಾಗಾಗಿಯೇ ಈ ರಸ್ಕಿ ಐಲ್ಯಾಂಡ್ ನ ಮೇಲೆ ಸಂಪೂರ್ಣ ಆಡಳಿತಾತ್ಮಕ ಹಿಡಿತ ಸಾಧಿಸಲು ಕೂಡ ಈ ಸೇತುವೆಯು ಸಹಕಾರಿಯಾಗಲಿದೆ. ರಷ್ಯಾದ ಪೂರ್ವ ಗಡಿ ಪ್ರದೇಶಗಳ ಮೂಲಕ ಸಂಪರ್ಕ ಕೊಂಡಿ ಬೆಸೆದಿರುವ ಈ ಐಲ್ಯಾಂಡ್ ನ ಸುಧಾರಣೆಯ ಜೊತೆಗೆ ರಷ್ಯಾದ ಈ ಪೂರ್ವ ಗದಿಪ್ರದೇಶಗಳೂ ಕೂಡ ಅಭಿವೃದ್ಧಿಯ ಬೆಳಕು ಕಾಣುತ್ತಿವೆ. ಈಗ ರಷ್ಯಾ ಕೈಗೊಳ್ಳುತ್ತಿರುವ ಈ ಪೂರ್ವ ಗಡಿ ಪ್ರದೇಶದ ಸುಧಾರಣಾ ಕ್ರಮಕ್ಕೆ ಮುಖ್ಯ ಕಾರಣ ಈ ಪ್ರದೇಶದಲ್ಲಿ ಕಂಡುಬರುವ ಹೇರಳವಾದ ನೈಸರ್ಗಿಕ ಸಂಪನ್ಮೂಲಗಳು. ಇಲ್ಲಿ ಹೆರಳವಾಗಿರುವ ಖನಿಜ ಸಂಪತ್ತು, ಲೋಹಗಳು, ಅರಣ್ಯ ಸಂಪತ್ತುಗಳು ಪುಟಿನ್ ನೇತ್ರತ್ವದ ರಷ್ಯಾ ಸರಕಾರವನ್ನು ಪೂರ್ವ ಗಡಿಪ್ರದೇಶಗಳತ್ತ ಸೆಳೆದಿವೆ. ಇದಕ್ಕಿಂತಲೂ ಪ್ರಮುಖ ಕಾರಣವೆಂದರೆ ಏಷ್ಯಾದ ಜೊತೆಗೆ ವಾಣಿಜ್ಯ, ವ್ಯವಹಾರಗಳ ಪ್ರಯೋಜನ ಪಡೆದುಕೊಳ್ಳುವುದು. ಅತಿ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಏಷ್ಯಾದಲ್ಲಿ ಈಗ ನೈಸರ್ಗಿಕ ಶಕ್ತಿ ಮೂಲಗಳು ಹಾಗೂ  ಕಚ್ಚಾ ವಸ್ತುಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಉತ್ತಮ ಮಾರುಕಟ್ಟೆ ಒದಗಿಸುತ್ತಿದೆ. ಈ ಅವಕಾಶದ ಸದ್ಬಳಕೆ ಪಡೆದುಕೊಳ್ಳುವುದು ಈ ಸೇತುವೆ ನಿರ್ಮಾಣದ ಮುಖ್ಯ ಉದ್ದೇಶ ಎನ್ನಬಹುದು. ಏಷ್ಯಾದ ಜೊತೆಗೆ ವಾಣಿಜ್ಯ ವ್ಯವಹಾರಗಳ ಅಭಿವೃದ್ದಿಗೆ ಈ ಸ್ಥಳ ಪ್ರಶಸ್ತವಾಗಿದೆ. ವಾಣಿಜ್ಯ ವ್ಯವಹಾರಗಳಲ್ಲಿ ಪ್ರಮುಖವೆನಿಸುವ ಸರಕು ಸಾಗಣೆಗೆ ಇದು ಹೇಳಿ ಮಾಡಿಸಿದ ಜಾಗ. ರಷ್ಯಾದ ಗ್ಯಾಸ್ ಹಾಗೂ ತೈಲ ಸಂಪನ್ಮೂಲಗಳನ್ನು ಏಷ್ಯಾದ ಮಾರುಕಟ್ಟೆಗಳಿಗೆ ಈ ಪ್ರದೇಶದ ಮೂಲಕ ಸರಾಗವಾಗಿ ಸಾಗಿಸಬಹುದು ಹಾಗೂ ಏಷ್ಯಾದಲ್ಲಿ ಉತ್ಪಾದನೆಗೊಂಡ ವಸ್ತುಗಳನ್ನು ರಷ್ಯಾದ ಮಾರುಕಟ್ಟೆಗಳಿಗೆ ಸಾಗಣೆ ಮಾಡಲು ಅನುಕೂಲಕರವಾಗಿದೆ. ಅಲ್ಲದೇ, ಈಗ ರಷ್ಯಾ ಸರಕಾರ ಆಸ್ತೆಯಿಂದ ನಿರ್ಮಿಸಿರುವ ಹೊಸ ಹೊಸ ರಸ್ತೆಗಳು, ಸೇತುವೆಗಳು, ಅಭಿವೃದ್ದಿಗೊಳಿಸಲ್ಪಟ್ಟ ಎಲ್ಲಾ ಮೂಲ ಸೌಕರ್ಯಗಳಿಂದಾಗಿ ಈ ಪ್ರದೇಶ ರಷ್ಯಾದ ಮುಂದಿನ ವಾಣಿಜ್ಯ ಕೇಂದ್ರವಾಗಿ ರೂಪುಗೊಳ್ಳುವುದರಲ್ಲಿ ಸಂಶಯವಿಲ್ಲ. ಆದರೆ ಅತಿಯಾದ ಬೃಷ್ಟಾಚಾರಕ್ಕೆ ಹೆಸರಾದ ಈ ಪ್ರದೇಶದಲ್ಲಿ ಸರಕಾರಿ ನೀತಿ ನಿಯಮಗಳು, ರಫ್ತು ಆಮದುಗಳಿಗೆ ಇರುವ ಆಡಳಿತ ತೊಡಕುಗಳು, ತೆರಿಗೆಯ ನೀತಿಗಳು ವಾಣಿಜ್ಯ ವ್ಯವಹಾರಗಳ ಬೆಳವಣಿಗೆಗೆ ದೊಡ್ಡ ತೊಡಕಾಗಿವೆ. ಹಾಗಾಗಿ ಈ ತೊಡಕುಗಳ ನಿವಾರಣೆಗೆ ಸರಕಾರ ಪ್ರಬಲ ಕ್ರಮ ಕೈಗೊಳ್ಳುವುದು ಅತಿ ಅವಶ್ಯಕವಾಗಿದೆ. ಈಗ ರಷ್ಯಾ ತನ್ನ ಪೂರ್ವ ಗಡಿಪ್ರದೇಶಗಳಲ್ಲಿ ನಿರ್ಮಿಸಿರುವ ಸೇತುವೆಗಳು, ಅತಿದೊಡ್ಡ ರೈಲು ಲಿಂಕ್ ಗಳು ಇಂಥ ದೊಡ್ಡ ದೊಡ್ಡ ಯೋಜನೆಗಳಲ್ಲಿ ರಷ್ಯಾದ ಸಾಮರ್ಥ್ಯವನ್ನು ನಿರೂಪಿಸಿವೆ. ಆದರೆ ಈ ಪ್ರದೇಶಗಳಲ್ಲಿ ಈಗ ಸಮರ್ಥ ಸರಕಾರಿ ಆಡಳಿತ ಅತಿ ಅವಶ್ಯವಾಗಿದೆ. ಬ್ರಷ್ಟಾಚಾರದಿಂದ ಬಳಲುತ್ತಿರುವ ಸರಕಾರಿ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿನ ಈ ಬಲಹೀನತೆಯನ್ನು ತೊಲಗಿಸಿ ಸಮರ್ಥ ಹಾಗೂ ದಕ್ಷ ಆಡಳಿತ ಜಾರಿಗೆ ಬರಬೇಕಾಗಿದೆ. ಇಲ್ಲವಾದಲ್ಲಿ, ವಾಣಿಜ್ಯೋದ್ದೇಶಗಳಿಗಾಗಿ ಇಷ್ಟೊಂದು ಖರ್ಚುವೆಚ್ಚಗೊಳಿಸಿ ಅಭಿವೃದ್ದಿಗೊಳಿಸಿರುವುದು ವ್ಯರ್ಥವಾಗಿಬಿಡುವ ಸಂಭವವಿದೆ. ಹಾಗೂ ರಸ್ಕಿ ಐಲಾಂಡ್ ಗೆ ನಿರ್ಮಿಸಲಾಗುತ್ತಿರುವ ಈ ಸೇತುವೆ ಒಂದು ಮಹತ್ವಾಕಾಂಕ್ಷಿ ಉದ್ದೇಶದ ವ್ಯಫಲ್ಯದ ಪ್ರತೀಕವಾಗಿಬಿಡುವ ಸಂಭವವಿದೆ

---ದಿಕ್ಸೂಚಿ October 2012

No comments:

Post a Comment