Friday, February 22, 2013

ನಮ್ಮವ್ಯಕ್ತಿತ್ವ ನಿರ್ಮಾಣದಲ್ಲಿ ಬಾಕ್ಟೀರಿಯಾಗಳದೂ ಪಾತ್ರವಿದೆಯೇ ..!?



ಮನುಷ್ಯನ ಜೀರ್ಣಾಂಗದಲ್ಲಿ ಹಲವು ಬಗೆಯ ಬಾಕ್ಟೀರಿಯಾಗಳು ಸದಾ ನೆಲೆಸಿರುತ್ತವೆ ಎಂಬುದು ನಮಗೆಲ್ಲಾ ತಿಳಿದೇ ಇದೆ. ಸೂಕ್ಷಾಣುಜೀವಿಗಳು ಹಾನಿಕಾರಕವಲ್ಲ. ಸದಾ ನಮ್ಮ ಕರುಳಿನಲ್ಲಿಯೇ ನೆಲೆಸಿರುವ ಇಂಥ ಹಲವಾರು ಬಗೆಯ ಲಕ್ಷಾಂತರ ಬಾಕ್ಟೀರಿಯಾ ಗಳಲ್ಲಿ ಬಹುತೇಕ ಬಾಕ್ಟೀರಿಯಾ ಗಳು ನಮಗೆ ಸಹಾಯಕಾರಿ. ಅವು ನಾವು ತಿಂದ ಆಹಾರವನ್ನು ಅರಗಿಸಿಕೊಳ್ಳಲು ಅವಶ್ಯವಾದ ವಿವಿಧ ಕಿಣ್ವಗಳನ್ನು ತಯಾರಿಸಿ ಕೊಡುತ್ತವೆ. ನಾವು ತಿನ್ನುವ ಆಹಾರದಲ್ಲಿರುವ ಪೋಷಕಾಂಶಗಳನ್ನು ರಕ್ತನಾಳಗಳಿಗೆ ವರ್ಗಾಯಿಸಲು ರಕ್ತ ಕಣಗಳು ಅವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತವೆ. ಇನ್ನು ಕೆಲವು ಬಗೆಯ ಬಾಕ್ಟೀರಿಯಾ ಗಳು ನಮ್ಮ ಸಂರಕ್ಷಣಾ ದಳದಂತೆ ಕೆಲಸ ಮಾಡುತ್ತವೆ. ನಮ್ಮ ಸುತ್ತಲಿನ ವಾತಾವರಣದಿಂದ, ಊಟ ತಿಂಡಿಗಳಿಂದ ನಮ್ಮ ದೇಹವನ್ನು ಪ್ರವೇಶಿಸುವ ಹಾನಿಕರ ಸೂಕ್ಷ್ಮಾಣುಗಳಿಂದ ನಮಗೇನೂ ಹಾನಿಯಾಗದಂತೆ ನಮ್ಮನ್ನು ರಕ್ಷಿಸಿ ಹಾನಿಕರ ಸೂಕ್ಷಾಣುಜೀವಿಗಳು ನಮ್ಮೊಳಗೆ ನೆಲೆಯೂರದಂತೆ ಮಾಡಿ ಅವನ್ನು ಹೊರಗೊಡಿಸುತ್ತವೆ. ಇನ್ನು ಕೆಲವು ಬಗೆಯ ಬಾಕ್ಟೀರಿಯಾಗಳು, ಫಂಗಿಗಳು, ಈಸ್ಟ್ ಗಳು, ಇನ್ನೂ ಹಲವಾರು ವಿಧದ ಸೂಕ್ಷ್ಮಾಣು ಜೀವಿಗಳು ಸಹಾಯಕಾರಿಯೂ ಅಲ್ಲ ಹಾನಿಕಾರಿಯೂ ಅಲ್ಲ. ಅವು ನಿರ್ಲಿಪ್ತವಾಗಿ ನಮ್ಮ ಜೀರ್ಣಾಂಗದಲ್ಲಿ ಮನೆ ಮಾಡಿಕೊಂಡು ಸಹಬಾಳ್ವೆ ಮಾಡುತ್ತಿರುತ್ತವೆ. ನಮ್ಮಕರುಳಿನಲ್ಲಿರುವ ಇಂಥ ಹಲವಾರು ಬಗೆಯ ಲಕ್ಷಾಂತರ ಸೂಕ್ಷ್ಮಾಣು ಜೀವಿಗಳ ಸಮೂಹಜಾಲವೇ ಗಟ್ ಫ್ಲೋರಾ. ಗಟ್ ಫ್ಲೋರಾದ ಸೂಕ್ಷ್ಮಾಣುಜೀವಿಗಳು ಹಾಗೂ ಜೀರ್ಣಾಂಗದಲ್ಲಿ ಅವು ನಡೆಸುವ ಚಟುವಟಿಕೆಗಳಿಗೆ ಕ್ರಿಯೆಪ್ರಕ್ರಿಯೆಗಳ ವ್ಯವಸ್ಥೆಗೆ ಮೈಕ್ರೋಬಯೋಮ್ ಎನ್ನುವರು. ನಮ್ಮ ರೋಗ ನಿರೋಧಕ ಶಕ್ತಿಯನ್ನು ಸಕ್ರಿಯವಾಗಿಡುವಲ್ಲಿ ಹಾಗೂ ನಿಯಂತ್ರಿಸುವಲ್ಲಿ ಕರುಳಿನ ಗಟ್ ಫ್ಲೋರಾದಲ್ಲಿನ ಸಹಾಯಕಾರಿ ಬಾಕ್ಟೀರಿಯಾಗಳು ಮಹತ್ವದ ಪಾತ್ರ ವಹಿಸುತ್ತವೆ ಅಲ್ಲದೇ ದಿನನಿತ್ಯ ಹೊರಗಿಂದ ಬರುವ ಹಾನಿಕಾರಕ ಸೂಕ್ಷ್ಮಾಣುಗಳಿಗೆ ತಡೆಗೋಡೆಯಾಗಿ ನಿಲ್ಲುತ್ತವೆ. ಹಾಗಾಗಿ ಆರೋಗ್ಯವಂತ ಗಟ್ ಫ್ಲೂರಾವನ್ನು ನಮ್ಮ ಜೀರ್ಣಾಂಗದಲ್ಲಿ ಹೊಂದಿರುವುದು ಮುಖ್ಯ. ಆರಾಗ್ಯವಂತ ಗಟ್ ಫ್ಲೂರಾ ಅಂದರೆ ಸಹಾಯಕಾರಿ ಬಾಕ್ಟೀರಿಯಾಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ಗಟ್ ಫ್ಲೂರ. (ನಮ್ಮ ಆಹಾರ ಕ್ರಮದಲ್ಲಿ ಹಣ್ಣು ತರಕಾರಿಗಳು ಹಾಗೂ ಸಹಾಯಕಾರಿ ಬಾಕ್ಟೀರಿಯಾಗಳಿರುವ ಮೊಸರು ಫರ್ಮೇಂಟೆಡ್ ಆಹಾರಗಳನ್ನು ಅಳವಡಿಸಿಕೊಂಡಲ್ಲಿ ಆರೋಗ್ಯವಂತ ಗಟ್ ಫ್ಲೋರಾವನ್ನು ಹೊಂದುವುದು ಸಾಧ್ಯ). ನಮ್ಮ ಆರೋಗ್ಯ ಹಾಗೂ ರೋಗನಿರೋಧಕ ಶಕ್ತಿಯು ಕರುಳಿನಲ್ಲಿರುವ ಗಟ್ ಫ್ಲೋರಾ ಮೇಲೆ ತುಂಬಾ ಅವಲಂಬಿತವಾಗಿವೆ ಎಂದು ಹಲವಾರು ವೈಜ್ನಾನಿಕ ಸಂಶೋಧನೆಗಳಿಂದ ದೃಢಪಟ್ಟಿವೆ. ಇದು ಬರೀ ಮನುಷ್ಯನಲ್ಲಷ್ಟೆ ಅಲ್ಲ ಪ್ರಾಣಿಗಳಲ್ಲೂ ಕೂಡ ತಿಂದ ಆಹಾರ ಸರಿಯಾಗಿ ಜೀರ್ಣವಾಗಲು ಹಾಗೂ ಉತ್ತಮ ಆರೋಗ್ಯಕ್ಕೆ ಕರುಳಿನಲ್ಲಿನ ಆರೋಗ್ಯಕರ ಮೈಕ್ರೋಬಯೋಮ್ ಅತ್ಯಗತ್ಯ.
                                                                   ಮನುಷ್ಯನ ಜೀರ್ಣಾಂಗದಲ್ಲಿರುವ ಮೈಕ್ರೋಬಯೋಮ್.   (photo Credit : http://cafescicolorado.org)
         
ಆದರೆ ಇತ್ತೀಚೆಗೆ ವಿಜ್ನಾನಿಗಳನ್ನು ಕಾಡುತ್ತಿರುವ ಪ್ರಶ್ನೆಯೆಂದರೆ ನಮ್ಮ ನಡುವಳಿಕೆ ಹಾಗೂ ವ್ಯಕ್ತಿತ್ವದ ಮೇಲೆ ಕೂಡ ಸೂಕ್ಷ್ಮಜೀವಿಗಳ ಪ್ರಭಾವವೇನಾದರೂ ಇದೆಯೇ ಎನ್ನುವುದು. ಇತ್ತೀಚಿಗಿನ ಹೊಸ ಸಂಶೋಧನೆಗಳು ಸೂಚಿಸುವುದೇನೆಂದರೆ ನಮ್ಮ ನಡುವಳಿಕೆಯ ಮೇಲೆ ಕೂಡ ಗಟ್ ಫ್ಲೋರಾದ ನೇರ ಪ್ರಭಾವವಿದೆ ಎಂದು. ಮನುಷ್ಯನ ಸಹಜವಾದ ಆರೋಗ್ಯಕರ ನಡುವಳಿಕೆಗೆ ಆರೋಗ್ಯಕರ ಗಟ್ ಫ್ಲೂರಾ ವನ್ನು ಹೊಂದಿರುವುದು ಅವಶ್ಯಕ ಎಂದು ವಿಜ್ನಾನಿಗಳು ಅಭಿಪ್ರಾಯ ಪಡುತ್ತಾರೆ. ಇತ್ತೀಚೆಗೆ ನಡೆಸಿದ ಇಲಿಗಳ ಮೇಲಿನ ಪ್ರಯೋಗ ಅಭಿಪ್ರಾಯಕ್ಕೆ ಪುಷ್ಟಿ ನೀಡಿದೆ. ಕೆನಡಾ ಮ್ಯಾಕ್ ಮಾಸ್ಟೆರ್ ಯುನಿವರ್ಸಿಟಿಯ ವಿಜ್ನಾನಿ ಸ್ಟೀಫನ್ ಕೊಲ್ಲಿನ್ಸ್ ವಿಷಯವಾಗಿ ಇಲಿಗಳ ಮೇಲೆ ಪ್ರಯೋಗ ನಡೆಸಿದರು. ಕೆಲವು ಇಲಿಗಳನ್ನು ಪ್ರಯೋಗಶಾಲೆಯಲ್ಲಿ ಸ್ಟೇರೈಲ್ ವಾತಾವರಣದಲ್ಲಿ ಯಾವುದೇ ಸೂಕ್ಷ್ಮಾಣು ಜೀವಿಗಳ ಸಂಪರ್ಕ ಬಾರದಂತೆ ಬೆಳೆಸಿದರು. ಹೀಗೆ ಬೆಳೆಸಿದ ಇಲಿಗಳ ನಡವಳಿಕೆಯಲ್ಲಿ ಅತಿಯಾದ ಆಶಿಶ್ತು ಕಂಡು ಬಂತು ಹಾಗೂ ಇಲಿಗಳ ಕಲಿಕೆಯ ಸಾಮರ್ಥ್ಯದಲ್ಲಿ ವಿಕಲತೆ ಕಂಡು ಬಂತು. ಸಂಶೋಧನೆಯಲ್ಲಿನ ಬೆಳವಣಿಗೆಯಿಂದ ಉತ್ತೇಜಿತಗೊಂಡ ವಿಜ್ನಾನಿಗಳು ವಿಷಯವಾಗಿ ತಮ್ಮ ಪ್ರಯೋಗವನ್ನು ಮುಂದುವರೆಸಿ ಎರಡು ಬೇರೆ ಬೇರೆ ತಳಿಗಳ ಇಲಿಗಳಲ್ಲಿರುವ ಗಟ್ ಬಾಕ್ಟೀರಿಯಾವನ್ನುಅದಲುಬದಲಾಯಿಸಿದರು. ಸ್ವಿಸ್ ಎಂಬ ತಳಿಯ ಇಲಿಗಳು ಸ್ವಭಾವತಃ ಅವುಗಳನ್ನು ನೋಡಿಕೊಳ್ಳುತ್ತಿರುವವರಿಗೆ ಕಚ್ಚುವ ಗುಣವಿರುವ ಉಗ್ರವಾಗಿ ವರ್ತಿಸುವ ಇಲಿಗಳು. ಇನ್ನೊಂದು ತಳಿಯಾದ BALB/ಸಿ ಇಲಿಗಳು ಮೃದು ಸ್ವಭಾವದ ಸ್ನೇಹಜೀವಿಗಳು. ಉಗ್ರ ಸ್ವಭಾವದ ಸ್ವಿಸ್ ತಳಿಯ ಇಲಿಗಳ ಗಟ್ ಬಾಕ್ಟೀರಿಯಾವನ್ನು ತೆಗೆದು ಮೃದು ಸ್ವಭಾವದ BALB/c ತಳಿಯೊಳಗೆ ಹಾಕಿದಾಗ, BALB/c ಇಲಿಗಳೂ ಕೂಡ ಉಗ್ರವಾಗಿ ವರ್ತಿಸತೊಡಗಿದವು. ಅಂತೆಯೇ, BALB/c ತಳಿಯ ಗಟ್ ಬಾಕ್ಟೀರಿಯಾವನ್ನುಸ್ವಿಸ್ ತಳಿಯ ಇಲಿಗಳಿಗೆ ಹಾಕಿದಾಗ ಅವು ಮೃದುವಾಗಿ ವರ್ತಿಸತೊಡಗಿದವು. ವಿಜ್ನಾನಿಗಳು ಇಲಿಗಳ ಮಿದುಳನ್ನು ಪರೀಕ್ಷಿಸಿದಾಗ ಗಟ್ ಬಾಕ್ಟೀರಿಯಾಗಳ ಅದಲುಬದಲು ಕ್ರಿಯೆ ಅವುಗಳ ಮಿದುಳಿನಲ್ಲಿ ಮೂಡ್ ಮತ್ತು ಮಾನಸಿಕ ಒತ್ತಡಗಳನ್ನು ನಿಯಂತ್ರಿಸುವ ಪ್ರೊಟೀನ್ ಗಳ ಅಳತೆಯಲ್ಲಿ ವ್ಯತ್ಯಾಸವಾಗಿರುವುದು ಕಂಡುಬಂತು. ಪ್ರಯೋಗ ನಡೆಸಿದ ಸ್ಟೀಫನ್ ಕೊಲ್ಲಿನ್ಸ್ ಪ್ರಕಾರ ಜೀರ್ಣಾಂಗದಲ್ಲಿರುವ ಗಟ್ ಬಾಕ್ಟೀರಿಯಾಗಳು ಉತ್ಪಾದಿಸುವ ಕೆಲವು ಕೆಮಿಕಲ್ ಗಳು ಮಿದುಳಿನ ಕಾರ್ಯನಿರ್ವಹಣೆಯ ಮೇಲೆ ನೇರ ಪ್ರಭಾವವನ್ನು ಹೊಂದಿವೆ. ಮಿದುಳಿನ ಕಾರ್ಯ ನಿಯಂತ್ರಿಸುವ ಕೆಲ ಪ್ರೊಟೀನ್ ಗಳು ಗಟ್ ಬಾಕ್ಟೀರಿಯಾಗಳಿಂದಲೇ ಸಿಗುತ್ತವೆ. ಹಾಗಾಗಿ ನಮ್ಮ ನಡತೆಯನ್ನು ನಡವಳಿಕೆಯನ್ನು ನಿಯಂತ್ರಿಸುವ ಮಿದುಳಿನ ಮೇಲೆ ಗಟ್ ಬಾಕ್ಟೀರಿಯಾಗಳ ಪ್ರಭಾವವಿದೆ ಎನ್ನುತ್ತಾರೆ. ಹಾಗಾಗಿಯೇ ಹೆಚ್ಚಿನ ಸಂಧರ್ಭಗಳಲ್ಲಿ ಕಂಡುಬರುವ ಮಾನಸಿಕ ಅಸಮತೋಲನ ಅಥವಾ ಮೂಡ್ ಡಿಸೋರ್ಡರ್ ಗಳು ಜೀರ್ಣಾಂಗದ ಅಸಮರ್ಪಕ ಕಾರ್ಯನಿರ್ವಹಣೆಯ ಮೇಲೆ ಅವಲಂಬಿತವಾಗಿರುವ ಸಾಧ್ಯತೆಗಳನ್ನು, ಹಾಗೂ ಇವುಗಳ ನಡುವಿನ ಸಂಭಂಧಗಳ ಮೇಲೆ ಸಂಶೋಧನೆಯು ಬೆಳಕು ಬೀರಲಿದೆ ಎಂದು ಸ್ಟೀಫನ್ ಕೊಲ್ಲಿನ್ಸ್ ಹೇಳುತ್ತಾರೆ.
ಆದರೆ ಮಾನವನ ವ್ಯಕ್ತಿತ್ವ ಎನ್ನುವುದು ವೈಜ್ನಾನಿಕವಾಗಿ ವಿವರಿಸಲು ಕ್ಲಿಷ್ಟಕರವಾದ ವಿಷಯ. ಒಬ್ಬ ಮನುಷ್ಯನ ವ್ಯಕ್ತಿತ್ವ ನಿರ್ಮಾಣ ಬಾಕ್ಟೀರಿಯಾಗಳ ಮೇಲೆಯೇ ಅವಲಂಬಿತವಾಗಿದೆ ಅನ್ನುವುದು ಸರಿಯಲ್ಲ. ಆದರೆ ಭಿನ್ನ ವಿಭಿನ್ನವಾಗಿರುವ ನಮ್ಮನ್ನು ನಾವಾಗಿ ಮಾಡುವಲ್ಲಿ, ನಮ್ಮ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಬಾಕ್ಟೀರಿಯಾಗಳ ಪಾತ್ರವೂ ಇರಬಹುದು ಎಂಬುದು ಇನ್ನೊಬ್ಬ ಮೈಕ್ರೋಬಯೋಮ್ ವಿಜ್ನಾನಿ ಜೇಮ್ಸ್ ಕಿನ್ರೋಸ್ ಅವರ ಅಭಿಪ್ರಾಯ.
 -----ದಿಕ್ಸೂಚಿ   ಮೇ 2012 ರಲ್ಲಿ ಪ್ರಕಟವಾದ ಬರಹ.